ಬೀಮ್ಸ್, ಜಾನ್
1837-1902. ಭಾಷಾವಿಜ್ಞಾನಿ. 1837 ಜೂನ್ 21 ರಂದು ಲಂಡನ್ನಿನ ಗ್ರೀನ್‍ವಿಚ್‍ನಲ್ಲಿ ಜನನ. ರೆವರೆಂಡ್ ತಾಮಸ್ ಬೀಮ್ಸ್ ಎಂಬವನ ಹಿರಿಯಮಗ. ಮರ್ಚೆಂಟ್ ಟೇಲರ್ ಶಾಲೆ ಮತ್ತು ಹೈಲೆಬರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ (1856-57). ಸಂಸ್ಕøತ ಮತ್ತು ಪರ್ಶಿಯನ್ ಭಾಷೆಗಳಲ್ಲಿ ವಿದ್ವತ್ ಸಂಪಾದಿಸಿದ. 1858ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಅಧಿಕಾರಿಯಾಗಿ ಭಾರತಕ್ಕೆ ಬಂದು 1893ರಲ್ಲಿ ನಿವೃತ್ತನಾಗುವ ತನಕ ಪಂಜಾಬ್, ಬಂಗಾಳ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ. ಆ ವೇಳೆಗೆ ಪಂಜಾಬಿ, ಬಂಗಾಳಿ ಮುಂತಾದ ಮುಖ್ಯ ಭಾಷೆಗಳ ಬಗ್ಗೆ ಪ್ರಭುತ್ವ ಪಡೆದು ಭಾಷಾಧ್ಯಯನದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ. ಕಾಲ್ಡ್‍ವೆಲ್ಲನ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ ಗ್ರಂಥದಿಂದ ಪ್ರಭಾವಿತನಾಗಿ, ಭಾರತದ ಆರ್ಯ ಭಾಷೆಗಳನ್ನು ಕುರಿತು ವ್ಯಾಪಕ ಅಧ್ಯಯನ ನಡೆಸಲು ಮುಂದಾದ (1866). ಇದರ ಫಲವಾಗಿ ಭಾರತದ ಆರ್ಯ ಭಾಷೆಗಳ ತೌಲನಿಕ ವ್ಯಾಕರಣ ಎಂಬ ಗ್ರಂಥವನ್ನು ಮೂರು ಸಂಪುಟಗಳಲ್ಲಿ 1872, 1875 ಮತ್ತು 1879ರಲ್ಲಿ ಪ್ರಕಟಿಸಿದ. ಈ ಗ್ರಂಥದಲ್ಲಿ ಭಾರತದಲ್ಲಿ ಪ್ರಚಲಿತವಿರುವ ಬಹುತೇಕ ಎಲ್ಲ ಆರ್ಯಭಾಷೆಗಳ ರೂಪರೇಷೆಯಿದೆ. ಭಾರತದ ಆರ್ಯಭಾಷೆಗಳ ಅಧ್ಯಯನ ನಡೆಸುವವರಿಗೆ ಇದೊಂದು ಆಕರ ಗ್ರಂಥ.

	1885ರ ತನಕವೂ ಬಂಗಾಳದ ಏಷಿಯಾಟಿಕ್ ಸೊಸ್ಶೆಟಿಯ ಸಂಪರ್ಕ ಹೊಂದಿದ್ದ ಬೀಮ್ಸ್ ಆತನ ಲೇಖನಗಳಿಂದ ಪತ್ರಿಕೆಯನ್ನು ಶ್ರೀಮಂತಗೊಳಿಸಿದ. ಔಟ್‍ಲೈನ್ಸ್ ಆಫ್ ಇಂಡಿಯನ್ ಫಿಲೊಲಜಿ (1867); ಭೋಜಪುರಿ ಡಯಲಕ್ಟ್ ಆಫ್ ಹಿಂದಿ (1868); ಸಪ್ಲಿಮೆಂಟಲ್ ಗ್ಲಾಸರಿ ಆಫ್ ಇಂಡಿಯನ್ ಟಮ್ರ್ಸ್ (1869); ಮಾಗರ್ ಲ್ಯಾಂಗ್ವೇಜ್ ಆಫ್ ನೇಪಾಳ್ (1870); ಬಂಗಾಳಿ ವ್ಯಾಕರಣ (1891)-ಇವು ಈತನ ಪ್ರಕಟಿತ ಕೃತಿಗಳು. ಇವಲ್ಲದೆ ಪ್ರಾಕೃತ ನಿಘಂಟನ್ನು ತರಬೇಕೆಂಬ ಈತನ ಆಶೆ ಕೈಗೂಡಲಿಲ್ಲ. 1902 ಮೇ 24ರಂದು ಸಾಮರ್‍ಸೆಟ್‍ನಲ್ಲಿ ನಿಧನನಾದ. 			
		(ಜೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ